ಪರ್‍ಸಿಮನ್ -
	ಎಬನೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ. ಡಯಾಸ್ಟೈರಾಸ್ ಜಾತಿಗೆ ಸೇರಿದೆ. ಇದರಲ್ಲಿ ಪ್ರಧಾನವಾಗಿ ಎರಡು ಪ್ರಭೇದಗಳುಂಟು : ಡಯಾಸ್ವೈರಾಸ್ ಕಾಕಿ (ಪೌರ್ವಾತ್ಯ ಬೆಳೆ) ಮತ್ತು ಡಯಾಸ್ಟೈರಾಸ್ ವರ್ಜಿನಿಯಾನ (ಅಮೆರಿಕನ್ ಬೆಳೆ). ಕಾಕಿ ಚೀನ ಮತ್ತು ಜಪಾನುಗಳಲ್ಲಿ ವ್ಯಾಪಕವಾಗಿ ಬೆಳೆಯುವ ಹಣ್ಣು. 19ನೆಯ ಶತಮಾನದಲ್ಲಿ ಫ್ರಾನ್ಸ್ ಮತ್ತು ಇತರ ಮೆಡಿಟರೇನಿಯನ್ ದೇಶಗಳಿಗೆ ಹರಡಿತು. ಸ್ವಲ್ಪ ಕಾಲಾನಂತರ ಅಮೆರಿಕದಲ್ಲಿಯೂ ಈ ಬೆಳೆಯ ಪ್ರವೇಶವಾಯಿತು. ಕ್ಯಾಲಿಪೋರ್ನಿಯದಲ್ಲಿ ಹಾಗೂ ಸಾಗರದಂಚಿನ ಸಂಸ್ಥಾನಗಳಲ್ಲಿ ಇದನ್ನು ಅಲ್ಪ ಪ್ರಮಾಣದ ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಾರೆ. ಈ ಸಸ್ಯಗಳಲ್ಲಿ ಅಗಲವಾದ. ಹೊಳಪಾದ. ದಟ್ಟ ಹಸುರಿನ ಎಲೆಗಳೂ ಹಳದಿ ಮಿಶ್ರಿತ ಹಸುರು ಹೂಗಳೂ ಇವೆ. ಕಾಂಡ ಸಾಮಾನ್ಯವಾಗಿ ನೇರವಾಗಿದ್ದು, ಶಾಖೆಗಳು ತಿರುಚಿಕೊಂಡಿರುತ್ತವೆ. ಹಣ್ಣಿನ ವ್ಯಾಸ ಸಾಮಾನ್ಯವಾಗಿ 5-8 ಸೆಂಮೀಗಳು; ಬಣ್ಣ ಹಳದಿ ಅಥವಾ ಕಿತ್ತಲೆಗೆಂಪು; ಟೊಮ್ಯಾಟೊ ಹಣ್ಣಿನಂತೆ ಕಾಣುತ್ತದೆ. ಹಣ್ಣಿನಲ್ಲಿ ಒಂದು ಬಗೆಯ ಘಾಟು ರಾಸಾಯನಿಕವಿದ್ದು. ಬಾಯಿಗೆ ಹಾಕಿಕೊಂಡರೆ ಒಗರಾಗುತ್ತದೆ. ಹಣ್ಣು ಬಹಳ ಕಳಿತ ಮೇಲೆ ಸುಕ್ಕುಸುಕ್ಕಾಗಿ ಕಾಣುತ್ತದೆ. ಆಗ ಅದು ರುಚಿಕರವಾಗಿರುವುದು. ಇದರಲ್ಲಿ ವಿಟಮಿನ್ ಎ ವಿಪುಲ; ಸ್ವಲ್ಪ ಪ್ರಮಾಣದಲ್ಲಿ ವಿಟಿಮಿನ್ ಸಿ ಕೂಡ ಉಂಟು. ಫೂಯಾ ಮುಂತಾದ ಬಗೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಹಣ್ಣು ಅತ್ಯಂತ ಗಡುಸಾಗಿರುತ್ತದೆ. ಜಪಾನಿನಲ್ಲಿ ಕೆಲವು ಬಗೆಯ ಅನಿಲಗಳ ಒತ್ತಡದಲ್ಲಿ ಹಣ್ಣನ್ನು ಮೃದುಗೊಳಿಸಲಾಗುತ್ತದೆ. ಚಳಿಗಾಲದಲ್ಲಿ-180 ಸೆ. ನಷ್ಟು ಚಳಿಯನ್ನು ಈ ಮರಗಳು ತಡೆಯಬಲ್ಲವು. 	ಅಮೆರಿಕದ ಪರ್‍ಸಿಮನ್ (ಡಯಾಸ್ಟೈರಾಸ್ ವರ್ಜಿನಿಯಾನ) ಚಿಕ್ಕ ಮರ. ಸುಮಾರು 10 ಮೀಟರ್ ಎತ್ತರಕ್ಕೆ ಬೆಳೆಯುವುದುಂಟು. ಸಾಗರದಂಚಿನದ ಸಂಸ್ಥಾನಗಳ ಉತ್ತರ ಭಾಗ. ಮಧ್ಯ ಪೆನ್ಸಿಲ್ವೇನಿಯ. ಇಲ್ಲಿನಾಯ್ ಮುಂತಾದೆಡೆಗಳಲ್ಲಿ ಇದರ ಬೇಸಾಯ ಉಂಟು. ಹಣ್ಣಿನ ವ್ಯಾಸ 3-5 ಸೆಂಮೀ ಸಾಮಾನ್ಯವಾಗಿ ಚಪ್ಪಟೆ. ಬಣ್ಣ ಕಡುಗೆಂಪು ಬಹುತೇಕ ಹಣ್ಣುಗಳಲ್ಲಿ ದೊಡ್ಡದಾದ ಚಪ್ಪಟೆ ಬೀಜಗಳಿವೆ. ಹಣ್ಣಿನ ತಿರುಳು ಕಳಿತ ಮೇಲೆ ಅದರ ಕಾಠಿಣ್ಯ ಹೋಗಿ ಮೃದುಗೊಳ್ಳುತ್ತದೆ. ವಿಶಿಷ್ಟವಾದ ಸಿಹಿ ರುಚಿ ಉಂಟು. ರೆಡ್ ಇಂಡಿಯನ್ನರು ನೆನೆ ಹಾಕಿದ ಪರ್‍ಸಿಮನ್ ತಿರುಳನ್ನು ಅರೆದು ಮುಸುಕಿನ ಜೋಳದ ಹಿಟ್ಟಿನೊಂದಿಗೆ ಬೆರಸಿ ಒಂದು ವಿಧದ ರುಚಿಕರ ರೊಟ್ಟಿ ತಯಾರಿಸುವರು.
(ಎಸ್.ಎಸ್.ಎಂಯು)
(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ